Thursday, March 15, 2012

ಅದೊಂದು ದಿನ

ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.
ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ, ಕೊನೆಗೆಲ್ಲೋ ನೆಲೆ ಕಂಡುಕೊಳ್ಳುವುದು ಬದುಕಿನ ಸೋಜಿಗಗಳಲ್ಲೊಂದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ.

‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?

ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.

ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.

ತೋಟದ ಬದಿಯಲ್ಲಿ ಝುಳು ಝಳು ನೀರು ಹರಿಯುತ್ತಿತ್ತು. ಆ ನೀರಿನಲ್ಲಿ ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.

ಮನುಷ್ಯ ಯಾವಾಗಲೂ ಭವಿಷ್ಯದಲ್ಲಿಯೇ ಬದುಕುತ್ತಿರುತ್ತಾನೆ. ಯಾವತ್ತೂ ಆತ ವರ್ತಮಾನದಲ್ಲಿ ಸುಖಿಯಲ್ಲ. ಮುಂದೆ ಇನ್ನೂ ಒಳ್ಳೆಯ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುತ್ತಾನೆ.

ವರ್ಷದ ಕೊನೆಯಲ್ಲಿ ನಾವೀಗ ನಿಂತಿದ್ದೇವೆ. ಬರಲಿರುವ ವರ್ಷ ಹರ್ಷದಾಯಕವಾಗಿರಬಹುದೆಂಬ ನಿರೀಕ್ಷೆ ಎಲ್ಲರದ್ದು. ಅದಕ್ಕಾಗಿ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಅವು ಮುಂದಿನ ವರ್ಷಾಂತ್ಯಕ್ಕೆ ಮತ್ತೆ ಹೊಸ ನಿರ್ಣಯಗಳಾಗಿ ಆವರ್ತನಗೊಳ್ಳುತ್ತವೆ.

Happu Ugadi to all...

Sharath Bhat

Monday, March 21, 2011

ನಿಲ್ಲಿ ಗುಬ್ಬಿಗಳೆ, ಎಲ್ಲಿ ಓಡುವಿರಿ, ನಮ್ಮ ಮನೆಗೆ ಬನ್ನಿ

ಬ್ಬಚ್ಚಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾದ ಪಕ್ಷಿಯದು. ಇಷ್ಟ ಬಂದಲ್ಲಿ ಕೂತು ಕಲರವ ಎಬ್ಬಿಸಿ ಪುಟಪುಟನೆ ಜಿಗಿದು, ಅತ್ತಿಂದಿತ್ತ ಹಾರುತ್ತ ಕಣ್ಣುಗಳಿಗೆ ವ್ಯಾಯಾಮ ಕೊಡುವ, ಸೋಮಾರಿ ಮಾನವನಿಗೆ ಬದುಕನ್ನು ಕಲಿಸಿಕೊಡುವ ಹಿಡಿಗಾತ್ರದ ಚಿಲಿಪಿಲಿ ಜೀವಗಳು ಇಂದು ತೀರಾ ಅಪರೂಪವಾಗುತ್ತಿವೆ.

ಮೊದಲೆಲ್ಲ ಬಸ್ಸು-ರೈಲು ನಿಲ್ದಾಣಗಳ ಚಾವಣಿಗಳಡಿಯಲ್ಲಿ, ಅಂಗಡಿಗಳ ಶಟರು ಬಾಗಿಲಿನ ಮೇಲುಗಡೆಯಲ್ಲಿ, ತಾರಸಿ ಕಟ್ಟಡಗಳಲ್ಲಿ ಉಳಿದು ಹೋದ ಜಾಗಗಳಲ್ಲಿ, ಒಡೆದು ಹೋದ ಗೋಡೆಯ ಬಿರುಕಿನಲ್ಲಿ, ಹೆಂಚಿನ ಮನೆಗಳ ಪಕ್ಕಾಸುಗಳಲ್ಲಿ -- ಹೀಗೆ ಮನುಷ್ಯನಿಗೆ ಬಳಕೆಯಾಗದ ಸ್ಥಳಗಳು ಗುಬ್ಬಿಗಳಿಗೆ ಮನೆಯಾಗುತ್ತಿದ್ದವು. ಅಲ್ಲೆಲ್ಲ ಅದರ ಕಿಚಿಕಿಚಿ ಕೇಳಿ ಬರುತ್ತಿತ್ತು. ಆದರೆ ಮಾನವನ ಆಧುನಿಕತೆಯ ಲೋಲುಪತೆಗೆ ನಿರುಪದ್ರವಿಗಳ ಸಾಲಿನ ಮೊದಲನೇ ಹಕ್ಕಿ ಪರೋಕ್ಷವಾಗಿ ಬಲಿಯಾಗಿದೆ, ಆಗುತ್ತಿದೆ. ನಮ್ಮ ಕಣ್ಣುಗಳಿಂದ ಆ ಪಕ್ಷಿಯೀಗ ವೇಗವಾಗಿ ಕಣ್ಮರೆಯಾಗುತ್ತಿದೆ.ಮನೆಯೊಳಗೆ, ಮಕ್ಕಳ ಜತೆ ಕಣ್ಣಾಮುಚ್ಚಾಲೆಯಾಡುವಂತೆ ಬಂದು-ಹೋಗುತ್ತಿದ್ದವು. ಮುಟ್ಟಬೇಕೆನ್ನುವಾಗ ಪುರ್ರನೆ ಹಾರಿ ಕಿಟಕಿಯ ರಾಡುಗಳಲ್ಲಿ ಕೂರುತ್ತಿದ್ದವು. ಅಲ್ಲಿಗೂ ಚಿಣ್ಣರು ದಾಂಗುಡಿಯಿಟ್ಟಾಗ ಹೆಚ್ಚೇನೂ ಹೆದರದೆ ಅದಕ್ಕಿಂತ ಮೇಲಿನ ಜಾಗವನ್ನಷ್ಟೇ ಹುಡುಕುತ್ತಿದ್ದವು. ಕಿಚ್‌ಕಿಚ್ ಎನ್ನುತ್ತಾ ಮತ್ತೆ ಬರುತ್ತಿದ್ದವು. ಈಗಿನ ಮಕ್ಕಳಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.

ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಯೇ ಅಲ್ಲ. ಕಂದು ಬಣ್ಣದಿಂದ ಕಂಗೊಳಿಸುವ, ಅಲ್ಲಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣಗಳನ್ನು ಹೊಂದಿರುವ ಸಂಘಜೀವಿ. ಅದಕ್ಕೆ ಜನನಿಬಿಡತೆ ಯಾವತ್ತೂ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಚೆಂದನೆಯ ಹಕ್ಕಿಯದು.

ಕಾಗೆ-ನವಿಲು ಕೊಡುವ ರೀತಿಯ ತೊಂದರೆಗಳ ಕಿರಿಕಿರಿಯೂ ಅವುಗಳ ಮೇಲಿಲ್ಲ. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತ ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುತ್ತಿದ್ದ ಹಕ್ಕಿಯೀಗ ಕಣ್ಮರೆಯಾಗಿದೆ. ಪಕ್ಷಿಪ್ರಿಯರಿಗೆ ನಿರಾಸೆಯಾಗಿದೆ

Thursday, June 3, 2010

ಮುಂಗಾರಿನ ಆ ದಿನಗಳು

ಹಲೋ,
ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ರೈತರಿಗೆ ಸಂತೋಷ ತಂದರೆ, ನಗರವಾಸಿಗಳು ಶಪಿಸುತ್ತ ಸ್ವಾಗತಿಸಲೇ ಬೇಕಾಗಿದೆ. ಮುಂಗಾರಿನ ಅ ಅದ್ಬುತ ಕ್ಷಣಗಳನ್ನೂ ಅನುಭವಿಸಿದ ನನ್ನ ಬಾಲ್ಯದ ನೆನಪು ಮತ್ತೆ ಮತ್ತೆ ನೆನಪಾಗುತ್ತಿದೆ. ಮಳೆಗಾಲ ಪ್ರಾರಂಭವಾದೊಡನೆ ತಂದೆಯೊಂದಿಗೆ ಹೊಸ ಪಾದರಕ್ಷೆಗಾಗಿ ಜಗಳವಾಡಿದ ಆ ದಿನಗಳು, ಮಳೆಯಲ್ಲಿ ನೆನೆಯುತ್ತ ಶಾಲೆಗೆ ಹೊಗಿದ ಆ ಕ್ಷಣ, ಸ್ನೇಹಿತನೊಡನೆ ಒಂದೇ ಕೊಡೆಯೊಳಗೆ ಶಾಲೆಗೆ ಹೋಗಿದ ಆ ದಿನಗಳು ಒಂದೇ ಎರಡೇ , ಜೋರಾಗಿ ಮಳೆಗಾಲ ಪ್ರಾರಂಭವಾಗಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದರೆ ಏನೋ ಒಂದು ಸಂತೋಷ. ರೈತರ ಬೆಳೆಗಳು ನಶವಾಗುತ್ತಿದ್ದರೆ ನಮಗೆ ಇನ್ನು ಜೋರಾಗಿ ಮಳೆ ಸುರಿಯಲಿ ಎಂಬ ಪ್ರಾರ್ಥನೆ ( ಯಾಕೆಂದರೆ ಶಾಲೆಗೆ ರಜಾ ಕೊಟ್ಟರು ಎಂಬ ದುರಾಲೋಚನೆ ). ಎಡ ಬಿಡದೆ ಸುರಿಯುತ್ತಿವ ಮಳೆ ಎಲ್ಲರನ್ನು ಆತಂಕದಲ್ಲಿ ದೂಡುತ್ತಿದ್ದರೆ ನಮೆಗೆ ಅದು ಯಾವದೇ ಪರಿವಯೇ ಇಲ್ಲದೆ ನೀರಿನಲ್ಲಿ ಆಟ ಆಡುತ್ತ ನಮ್ಮದೇ ಲೋಕದಲ್ಲೂ ವಿಹರಿಸುತ್ತಾ ಇದ್ದ ಆ ಕ್ಷಣಗಳು.
ಮಳೆಗಾಲವೆಂದರೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಬೆಂಗಳೂರಿಗರನ್ನು ನೋಡಿದಾಗ ಇವೆಲ್ಲವೂ ನೆನಪಾಯಿತು .
ಅದಕ್ಕೆ ಗೀಚಿದ್ದೇನೆ .
ಸ್ವಾಗತವಿರಲಿ ,

ನಿಮ್ಮವ,
ಶರತ್ ಭಟ್

Tuesday, June 1, 2010

ವಿಶ್ವಕಪ್ ಫೂಟ್ ಬಾಲ್

ಹಲೋ,
ಒಲಂಪಿಕ್ ನಂತರ ಜಗತ್ತಿನ ಅತೀ ದೊಡ್ಡ ಕ್ರೀಡಾ ಕೂಟವಾದ ಫೂಟ್ ಬಾಲ್ ವಿಶ್ವಕಪ್ ಗೆ ಕ್ಷಣ ಗಣನೆ ಪ್ರಾರಂಭವಾಗಿದೆ . ಏಕೋ ನನ್ನ ಮನಸ್ಸು ಕಳೆದ ಕೆಲವು ದಿನಗಳಿಂದ ಅದನ್ನೇ ಯೋಚಿಸುತ್ತಿದ್ದೆ . ಭಾರತ ಪಾಲ್ಗೊಳ್ಳುತ್ತಿಲ್ಲ ಎಂಬ ಬೇಸರವಾದರೆ ಆಟದ ಸೊಬಗನ್ನು ಅಸ್ವಾದಿಸಲು ಕಾತುರನಾಗಿರುವೆ.

ಬೆಕಮ , ಬಲ್ಲಕ್ ಗಾಯದ ಕಾರಣದಿಂದ ಪಂದ್ಯಾವಳಿ ಇಂದ ಹೊರಗೆ ಇರವುದು ಹಾಗು ರೋನಲ್ದಿಹೋ, ಅದ್ರಯಾನೋ ಬ್ರಜಿಲ್ ತಂಡದ ಕೋಚ್ ಹೊರಗೆ ಇಟ್ಥಿರುವದು ಆಶ್ಚರ್ಯವಾಗಿದೆ. ಜೂನ್ ೧೧ ರಿಂದ ಪ್ರಾರಂಭವಾಗಲಿರುವ ಇ ಮೇಳಕ್ಕೆ ಜಗತ್ತಿನ ಪ್ರಭಲ ೩೨ ದೇಶಗಳು ಪಾಲ್ಗೊಳ್ಳುತ್ತಿವೆ. ಸ್ಪೇನ್, ಅರ್ಜಂಟಿನ , ಬ್ರಾಜಿಲ್ ಗೆಲ್ಲುವ ನೆಚ್ಚಿನ ತಂಡಗಳಗಿದ್ದರೆ, ಇಂಗ್ಲೆಂಡ್ ಫ್ರಾನ್ಸ್ ಜರ್ಮನಿ ತಂಡಗಳು ಕೂಡ ಪ್ರಶಷ್ಟಿಗಾಗಿ ಹೋರಾಡಲು ಸನ್ನದ್ದವಾಗಿದೆ . ಅಂತು ಜೂನ್ ೧೧ ರಿಂದ ೧ ತಿಂಗಳು ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಲು ವಿಶ್ವಕಪ್ ಫೂಟ್ ಬಾಲ್ ಸಿದ್ದವಾಗಿದೆ.

Sunday, May 30, 2010

ಬ್ಲಾಗ್

ನನ್ನ ಆತ್ಮೀಯ ಸ್ನೇಹಿತರೆ,

ನಾನು ಕೂಡ ಬಹಳ ದಿನಗಳಿಂದ ಕೇಳುತ್ತಿದ್ದ ಬ್ಲಾಗ್ ಬಗ್ಗೆ ಕುತೂಹಲದಿಂದ ಇಣುಕಿ ನೋಡಿದಾಗ ಸ್ವಲ್ಪ ಏನಾದರು ಬರೆಯಬೇಕೆಂದು ಅನಿಸುತ್ತಿದ್ದೆ. ಅದಕ್ಕಾಗಿ ತಯಾರಿಯಲ್ಲಿ ಇರುವೆ .

ಸಂತೋಷದೊಂದಿಗೆ,
ನಿಮ್ಮವ,
ಶರತ್ ಭಟ್