Monday, March 21, 2011

ನಿಲ್ಲಿ ಗುಬ್ಬಿಗಳೆ, ಎಲ್ಲಿ ಓಡುವಿರಿ, ನಮ್ಮ ಮನೆಗೆ ಬನ್ನಿ

ಬ್ಬಚ್ಚಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾದ ಪಕ್ಷಿಯದು. ಇಷ್ಟ ಬಂದಲ್ಲಿ ಕೂತು ಕಲರವ ಎಬ್ಬಿಸಿ ಪುಟಪುಟನೆ ಜಿಗಿದು, ಅತ್ತಿಂದಿತ್ತ ಹಾರುತ್ತ ಕಣ್ಣುಗಳಿಗೆ ವ್ಯಾಯಾಮ ಕೊಡುವ, ಸೋಮಾರಿ ಮಾನವನಿಗೆ ಬದುಕನ್ನು ಕಲಿಸಿಕೊಡುವ ಹಿಡಿಗಾತ್ರದ ಚಿಲಿಪಿಲಿ ಜೀವಗಳು ಇಂದು ತೀರಾ ಅಪರೂಪವಾಗುತ್ತಿವೆ.

ಮೊದಲೆಲ್ಲ ಬಸ್ಸು-ರೈಲು ನಿಲ್ದಾಣಗಳ ಚಾವಣಿಗಳಡಿಯಲ್ಲಿ, ಅಂಗಡಿಗಳ ಶಟರು ಬಾಗಿಲಿನ ಮೇಲುಗಡೆಯಲ್ಲಿ, ತಾರಸಿ ಕಟ್ಟಡಗಳಲ್ಲಿ ಉಳಿದು ಹೋದ ಜಾಗಗಳಲ್ಲಿ, ಒಡೆದು ಹೋದ ಗೋಡೆಯ ಬಿರುಕಿನಲ್ಲಿ, ಹೆಂಚಿನ ಮನೆಗಳ ಪಕ್ಕಾಸುಗಳಲ್ಲಿ -- ಹೀಗೆ ಮನುಷ್ಯನಿಗೆ ಬಳಕೆಯಾಗದ ಸ್ಥಳಗಳು ಗುಬ್ಬಿಗಳಿಗೆ ಮನೆಯಾಗುತ್ತಿದ್ದವು. ಅಲ್ಲೆಲ್ಲ ಅದರ ಕಿಚಿಕಿಚಿ ಕೇಳಿ ಬರುತ್ತಿತ್ತು. ಆದರೆ ಮಾನವನ ಆಧುನಿಕತೆಯ ಲೋಲುಪತೆಗೆ ನಿರುಪದ್ರವಿಗಳ ಸಾಲಿನ ಮೊದಲನೇ ಹಕ್ಕಿ ಪರೋಕ್ಷವಾಗಿ ಬಲಿಯಾಗಿದೆ, ಆಗುತ್ತಿದೆ. ನಮ್ಮ ಕಣ್ಣುಗಳಿಂದ ಆ ಪಕ್ಷಿಯೀಗ ವೇಗವಾಗಿ ಕಣ್ಮರೆಯಾಗುತ್ತಿದೆ.ಮನೆಯೊಳಗೆ, ಮಕ್ಕಳ ಜತೆ ಕಣ್ಣಾಮುಚ್ಚಾಲೆಯಾಡುವಂತೆ ಬಂದು-ಹೋಗುತ್ತಿದ್ದವು. ಮುಟ್ಟಬೇಕೆನ್ನುವಾಗ ಪುರ್ರನೆ ಹಾರಿ ಕಿಟಕಿಯ ರಾಡುಗಳಲ್ಲಿ ಕೂರುತ್ತಿದ್ದವು. ಅಲ್ಲಿಗೂ ಚಿಣ್ಣರು ದಾಂಗುಡಿಯಿಟ್ಟಾಗ ಹೆಚ್ಚೇನೂ ಹೆದರದೆ ಅದಕ್ಕಿಂತ ಮೇಲಿನ ಜಾಗವನ್ನಷ್ಟೇ ಹುಡುಕುತ್ತಿದ್ದವು. ಕಿಚ್‌ಕಿಚ್ ಎನ್ನುತ್ತಾ ಮತ್ತೆ ಬರುತ್ತಿದ್ದವು. ಈಗಿನ ಮಕ್ಕಳಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.

ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಯೇ ಅಲ್ಲ. ಕಂದು ಬಣ್ಣದಿಂದ ಕಂಗೊಳಿಸುವ, ಅಲ್ಲಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣಗಳನ್ನು ಹೊಂದಿರುವ ಸಂಘಜೀವಿ. ಅದಕ್ಕೆ ಜನನಿಬಿಡತೆ ಯಾವತ್ತೂ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಚೆಂದನೆಯ ಹಕ್ಕಿಯದು.

ಕಾಗೆ-ನವಿಲು ಕೊಡುವ ರೀತಿಯ ತೊಂದರೆಗಳ ಕಿರಿಕಿರಿಯೂ ಅವುಗಳ ಮೇಲಿಲ್ಲ. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತ ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುತ್ತಿದ್ದ ಹಕ್ಕಿಯೀಗ ಕಣ್ಮರೆಯಾಗಿದೆ. ಪಕ್ಷಿಪ್ರಿಯರಿಗೆ ನಿರಾಸೆಯಾಗಿದೆ