Thursday, March 15, 2012

ಅದೊಂದು ದಿನ

ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.
ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ, ಕೊನೆಗೆಲ್ಲೋ ನೆಲೆ ಕಂಡುಕೊಳ್ಳುವುದು ಬದುಕಿನ ಸೋಜಿಗಗಳಲ್ಲೊಂದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ.

‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?

ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.

ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.

ತೋಟದ ಬದಿಯಲ್ಲಿ ಝುಳು ಝಳು ನೀರು ಹರಿಯುತ್ತಿತ್ತು. ಆ ನೀರಿನಲ್ಲಿ ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.

ಮನುಷ್ಯ ಯಾವಾಗಲೂ ಭವಿಷ್ಯದಲ್ಲಿಯೇ ಬದುಕುತ್ತಿರುತ್ತಾನೆ. ಯಾವತ್ತೂ ಆತ ವರ್ತಮಾನದಲ್ಲಿ ಸುಖಿಯಲ್ಲ. ಮುಂದೆ ಇನ್ನೂ ಒಳ್ಳೆಯ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುತ್ತಾನೆ.

ವರ್ಷದ ಕೊನೆಯಲ್ಲಿ ನಾವೀಗ ನಿಂತಿದ್ದೇವೆ. ಬರಲಿರುವ ವರ್ಷ ಹರ್ಷದಾಯಕವಾಗಿರಬಹುದೆಂಬ ನಿರೀಕ್ಷೆ ಎಲ್ಲರದ್ದು. ಅದಕ್ಕಾಗಿ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಅವು ಮುಂದಿನ ವರ್ಷಾಂತ್ಯಕ್ಕೆ ಮತ್ತೆ ಹೊಸ ನಿರ್ಣಯಗಳಾಗಿ ಆವರ್ತನಗೊಳ್ಳುತ್ತವೆ.

Happu Ugadi to all...

Sharath Bhat